ನಿಲೇಕಣಿ ಕಾರ್ಡಿಗೆ ಮುಂದಿನ ವಾರ ಏನಾಗುತ್ತೋ?
ಗುರುವಾರ, ಜನವರಿ 12, 2012, 13:53 [IST]
ನಿಮ್ಮ ಇನ್ ಬಾಕ್ಸ್ ನೊಳಗೆ ಬಿಸಿಬಿಸಿ ಸುದ್ದಿ
ನವದೆಹಲಿ, ಜ.12: ಕನ್ನಡಿಗ ನಂದನ್ ನಿಲೇಕಣಿ ನೇತೃತ್ವದ ವಿಶಿಷ್ಟ ಗುರುತು ಸಂಖ್ಯೆ (ಯುಐಡಿ) ಯೋಜನೆ ಸಂಬಂಧ ಗೃಹ ಸಚಿವಾಲಯ ಹಾಗೂ ಯೋಜನಾ ಆಯೋಗಗಳ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು ತಾಕಲಾಡುತ್ತಿವೆ. ಇದನ್ನು ನಿವಾರಿಸುವ ಸಲುವಾಗಿ ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ವಿಶಿಷ್ಟ ಗುರುತು ಸಂಖ್ಯೆಗೆ ಸಂಬಂಧಿಸಿದ ಸಂಪುಟ ಸಮಿತಿಯು (ಸಿಸಿಯುಐಡಿ) ಮುಂದಿನ ವಾರ ಸಭೆ ನಡೆಸಲಿದೆ.
ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಗೃಹ ಸಚಿವ ಪಿ. ಚಿದಂಬರಂ, ಯೋಜನಾ ಆಯೋಗದ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಮತ್ತು ನಂದನ್ ನಿಲೇಕಣಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಯುಐಡಿ ಪ್ರಕ್ರಿಯೆಯು ರಾಷ್ಟ್ರೀಯ ಜನಗಣತಿ ದಾಖಲಾತಿಯ (ಎನ್‌ಪಿಆರ್) ಪುನರಾವರ್ತನೆ ಆಗುವ ಸಂಭವ, ಯೋಜನೆಗೆ ತಗುಲುವ ವೆಚ್ಚ, ಆಧಾರ್ ಕಾರ್ಡ್‌ಗಳಿಗಾಗಿ ಸಾರ್ವಜನಿಕರ ನೋಂದಣಿ ಇನ್ನಿತರ ವಿವಾದಾಸ್ಪದ ಅಂಶಗಳ ಬಗ್ಗೆ ಸಮಿತಿ ಚರ್ಚಿಸಲಿದೆ.
ಈ ಯೋಜನೆಯು ಎನ್‌ಪಿಆರ್ ಗಿಂತ ಸಂಪೂರ್ಣ ಭಿನ್ನ ಎಂಬುದು ಯೋಜನಾ ಆಯೋಗದ ಪ್ರತಿಪಾದನೆ. ಅದು 20 ಕೋಟಿಗಿಂತ ಹೆಚ್ಚು ನಾಗರಿಕರನ್ನು ನೋಂದಣಿ ಮಾಡಲು ಅವಕಾಶ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಕೋರಿದೆ. ಒಂದೊಮ್ಮೆ ಇದಕ್ಕೆ ಅನುಮತಿ ನೀಡದಿದ್ದರೆ ಯುಐಡಿ ಯೋಜನೆ ಸ್ಥಗಿತಗೊಳ್ಳುತ್ತದೆ ಎಂದು ಆತಂಕವನ್ನೂ ವ್ಯಕ್ತಪಡಿಸಿದೆ.
ಆಧಾರ್ ಸಂಖ್ಯೆ ಆಧರಿಸಿ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಅರ್ಹರಿಗೆ ತಲುಪಿಸಬಹುದು. ಸೋರಿಕೆ ತಡೆಗಟ್ಟುವ ಮೂಲಕ ಸರ್ಕಾರ ಭಾರಿ ಪ್ರಮಾಣದ ಸಬ್ಸಿಡಿ ಉಳಿಸಬಹುದು. ಆನ್‌ಲೈನ್ ದೃಢೀಕರಣ ಸೇರಿದಂತೆ ಹಲವು ಸುರಕ್ಷಾ ಕ್ರಮಗಳನ್ನು ಯೋಜನೆ ಒಳಗೊಂಡಿದೆ ಎಂದೂ ಯೋಜನಾ ಆಯೋಗ ಸಮರ್ಥಿಸಿಕೊಳ್ಳುತ್ತಿದೆ.
Topics:ನಂದನ್ ನಿಲೇಕಣಿ, ಆಧಾರ್, ಅಣ್ಣಾ ಹಜಾರೆ, ಉಪವಾಸ, ಇನ್ಫೋಸಿಸ್, ಬೆಂಗಳೂರು, ಬಿಪಿಒ, ಟೆಕ್ಕಿ, ವಿವಾದ,nandan nilekani, adhar, infosys, bangalore, techie, bpo, anna hazare, jan lokpal bill
English summary
Cabinet committee will sit next week to take a decision on Nilekani Adhar number. Setback for Nandan Nilekani's UID scheme